ಬಿಳಿಮೀನು
ಸೈಪ್ರಿನಿಫಾರ್ಮೀಸ್ ಗಣದ ಸೈಪ್ರಿನಿಡೀ ಕುಟುಂಬಕ್ಕೆ ಸೇರಿದ ಮೀನು. ಪೆರುವಾಲ, ಎಳಲು ಪರ್ಯಾಯ ನಾಮಗಳು. ಉತ್ತರ ಭಾರತದಲ್ಲಿ ಮಹಸೀರ್ ಎಂದು ಪ್ರಸಿದ್ಧವಾಗಿದೆ. ಇವುಗಳಲ್ಲಿ ಹಲವಾರು ಪ್ರಭೇದಗಳು ಕಂಡು ಬರುತ್ತವೆ. ಟೋರ್ ಟೋರ್, ಟೋರ್ ಮುಸಲ್ಲಾ, ಟೋರ್ ನೆಯಿಲ್ಲಿ, ಟೋರ್ ಕುದ್ರಿ ಪ್ರಮುಖವಾದವು. ಸಿಹಿನೀರು ಮೀನಾದ ಇದು ಭಾರತಾದ್ಯಂತ ನದಿಗಳ ತಿಳಿನೀರಿನ ಪಾತ್ರಗಳಲ್ಲಿ ಸಣ್ಣ ಉರುಟು ಕಲ್ಲುಗಳಿರುವೆಡೆ ವಾಸಿಸುತ್ತದೆ. ಬೆಟ್ಟದ ತೊರೆಗಳಲ್ಲಿ ಹೆಚ್ಚು ಸಿಗುತ್ತದೆ. ಮೈಸೂರಿನ ಕಾವೇರಿ ನದಿ ಇದರ ಬೇಟೆಗೆ ಪ್ರಸಿದ್ಧವಾಗಿದೆ. ಶ್ರೀರಂಗಪಟ್ಟಣದ ಹತ್ತಿರ ಇರುವ ದೊಡ್ಡಿನಮಡು ಮತ್ತು ಬಿಲಾಮ್ಮನ ಮಡು, ತಿರಮಕೂಡಲು ನರಸೀಪುರ ತಾಲ್ಲೂಕಿನ ಮುಡುಕುತೊರೆ, ಕಾಕನಕೋಟೆ ಕಾಡಿನಲ್ಲಿ ಹರಿಯುವ ಕಬಿನೀ ನದಿಯ ಮಡುಗಳು ಈ ಮೀನಿನ ಬೇಟೆಗೆ ಪ್ರಸಿದ್ಧವಾದ ತಾಣಗಳು. ಉತ್ತರ ಭಾರತದಲ್ಲಿ ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಮಧ್ಯಪ್ರದೇಶಗಳಲ್ಲೂ ಇದು ಕಾಣ ದೊರೆಯುತ್ತದೆ.

ಬಿಳಿಮೀನು ದೊಡ್ಡ ಗಾತ್ರದ್ದು; ಸುಮಾರು ಒಂದು ಮೀಟರ್ ಉದ್ದ ಬೆಳೆಯುವುದುಂಟು. ಮೂತಿ ಚೂಪಾಗಿದೆ. ಮೈಮೇಲೆ ಸೈಕ್ಲಾಯಿಡ್ ಮಾದರಿ ಹುರುಪೆಗಳಿವೆ. ಹುರುಪೆಗಳು ಇತರ ಮೀನುಗಳವಕ್ಕೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡವು. ಮೀನಿನ ಮೈಬಣ್ಣ ತುಂಬ ಚೆಲುವಾಗಿದೆ. ತಲೆ, ಬೆನ್ನುಭಾಗ ಗಾಢ ಹಸುರು ಅಥವಾ ಆಲಿವ್ ಹಸುರು ಅಕ್ಕಪಕ್ಕಗಳು ಬಂಗಾರಬಣ್ಣದವು. ಉದರ ಭಾಗ ಬಿಳಿ. ಅಂಚುಗಳು ಮಾತ್ರ ಕೆಂಪು.

ಇದು ಸಾಮಾನ್ಯವಾಗಿ ಚಳಿಗಾಲದಲ್ಲಿ ನದಿಗಳಲ್ಲಿ ತಿಳಿನೀರಿರುವ ಕಡೆ, ಉರಟು ಕಲ್ಲುಗಳಿರುವೆಡೆ ಮೊಟ್ಟೆಯಿಡುತ್ತವೆ. ಸ್ಯಾಮನ್ ಮೀನಿನಂತೆ ಇದು ಕೂಡ ಪ್ರವಾಹಕ್ಕೆದುರಾಗಿ ಈಜುತ್ತ ನೆಗೆಯುತ್ತ ಮೊಟ್ಟೆಯಿಡುವ ತಾಣಗಳನ್ನು ಅರಸಿಕೊಂಡು ಹೋಗುತ್ತದೆ. ಇದು ಒಳ್ಳೆಯ ಆಹಾರ ಮೀನೆಂದು ಹೆಸರಾಗಿದೆ. ಅಷ್ಟೇ ಒಳ್ಳೆಯ ಬೇಟೆಮೀನೂ (ಗೇಮ್ ಫಿಶ್) ಹೌದು. ಇದನ್ನು ಅಣೆಕಟ್ಟು, ಕೆರೆಗಳಲ್ಲಿ, ಹಾಗೂ ಮತ್ಸ್ಯಧಾಂಗಳಲ್ಲಿ ಬೆಳೆಸಲಾಗಿದೆ. 
(ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ